ಪೋಸ್ಟ್‌ಗಳು

ಕಾವ್ಯ ಮೀಮಾಂಸೆ

ಕಾವ್ಯಮೀಮಾಂಸೆ (ಕಳೆದ ೨೫ ವರ್ಷಗಳಲ್ಲಿ : ಸು. ೧೯೪೦-೧೯೬೫) ೧ ಕಾವ್ಯಮೀಮಾಂಸೆ ಎಂದರೆ ಕಾವ್ಯವನ್ನು ಕುರಿತ ಚರ್ಚೆ ಎಂದು ಅರ್ಥ. ಕಾವ್ಯವೆಂದರೆ ಏನು? ಅದು ಏಕೆ ನಿರ್ಮಿತಿಯಾಗುತ್ತದೆ? ಹೇಗೆ ನಿರ್ಮಿತಿಯಾಗುತ್ತದೆ? ಅದರ ಉದ್ದೇಶ, ವ್ಯಾಪ್ತಿ, ಪ್ರಯೋಜನಗಳೇನು? ಎನ್ನುವ ಸಂಗತಿಗಳನ್ನು ಕುರಿತ ಚರ್ಚೆಯೆ ಕಾವ್ಯಮೀಮಾಂಸೆ. ಕಾವ್ಯ ನಿರ್ಮಿತಿಯ ನಂತರ ಅದನ್ನು ಆಸ್ವಾದಿಸುವ ಸಹೃದಯರ ರುಚಿ ಸಾಮರ್ಥ್ಯಗಳನ್ನು ಕುರಿತ ವಿಚಾರ, ಕೃತಿಯನ್ನು ಕುರಿತ ಅಭಿಪ್ರಾಯ, ಟೀಕೆ, ಚರ್ಚೆ ಗುಣಾವಗುಣ ವಿವೇಚನೆ ಮೌಲ್ಯ ನಿರ್ಧಾರ-ಇವುಗಳು ಕಾವ್ಯವಿಮರ್ಶೆಯ ವಲಯಕ್ಕೆ ಸೇರುತ್ತವೆ. ಆದರೆ ಈ ಎರಡೂ ಮುಖಗಳು ಒಂದಕ್ಕೊಂದು ಪೂರಕವಾಗಿ, ಒಂದರ ವಿಚಾರವನ್ನು ಚರ್ಚಿಸುವಾಗ ಮತ್ತೊಂದರ ಸಂಬಂಧ ಸಹಜವಾಗಿಯೆ ಗಮನಿಸುವಂಥದ್ದಾಗಿದ್ದರೂ, ಪ್ರಕೃತ ಪ್ರಬಂಧದ ಉದ್ದೇಶಕ್ಕಾಗಿ ಕಾವ್ಯಮೀಮಾಂಸೆಯ ವಿಷಯವನ್ನು ಮೇಲೆ ಹೇಳಿದ ಪರಿಧಿಯೊಳಗೆ ಬೇಕೆಂತಲೇ ಅಳವಡಿಸಿಕೊಂಡು ವಿವೇಚಿಸಲಾಗಿದೆ. ಅದರಲ್ಲಿಯೂ ಕಳೆದ ಇಪ್ಪತೈದು ವರ್ಷಗಳ- ಅವಧಿಯಲ್ಲಿ ಕನ್ನಡದಲ್ಲಿ ಕಾವ್ಯಮೀಮಾಂಸೆ ಬೆಳೆದು ಬಂದ ರೀತಿಯನ್ನು ಕುರಿತದ್ದು. ಕಾವ್ಯವೆಂದರೆ ಏನು?-ವಿಶಾಲವಾದ ಅರ್ಥದಲ್ಲಿ ಸಾಹಿತ್ಯವೆಂದರೇನು? ಎಂಬ ಪ್ರಶ್ನೆಗೆ ಸರಳ ಸಾಧಾರಣವಾದ ಮೊದಲ ಉತ್ತರ, ಅದು ಶಬ್ದಾರ್ಥಸಹಿತವಾದದ್ದು ಎನ್ನುವುದು. ಮನುಷ್ಯ ಎಂದರೆ ಕಾಲುಗಳುಳ್ಳ ಒಂದು ಪ್ರಾಣಿ ವಿಶೇಷ ಎಂದು ಹೇಳುವುದು ಹೇಗೋ ಹಾಗೆ ‘ಕಾವ್ಯ ಶಬ್ದಾರ್ಥಸಹಿತವಾದದ್ದು’ ಎನ್ನುವುದು ...